ಸುಳಾದಿ ಸಾಹಿತ್ಯ ಪರಿಚಯ
ಕೀರ್ತನೆ,ಸುಳಾದಿ,ಉಗಾಭೋಗಗಳು ಹರಿದಾಸ ಸಾಹಿತ್ಯದ ಪ್ರಮುಖ ರೂಪಗಳು.ಹರಿದಾಸ ಸಾಹಿತ್ಯದಲ್ಲಿ ತ್ರಿಪದಿ,ಷಟ್ಪದಿ,ಗುಂಡಕ್ರೀಯೆ ದಂಡಕ ಮುಂತಾದ ದೇಸಿ ರೂಪಗಳು ಕಂಡು ಬರುತ್ತದೆ. ವಾದಿರಾಜರ 'ಬಿರುದಿನ ಸುವ್ವಾಲಿ',ಜಗನ್ನಾಥದಾಸರ,'ತತ್ವಸುವ್ವಾಲಿ'ಗಳು ತ್ರಿಪದಿಯಲ್ಲಿ ಬಂದರೆ,ರಾಮಧಾನ್ಯ ಚರಿತೆ(ಕನಕದಾಸರು),ಹರಿಕಥಾಮೃತಸಾರ (ಜಗನ್ನಾಥದಾಸರು) ಗಳಂಥವು ಷಟ್ಪದಿಯಲ್ಲಿ ರಚನೆಗೊಂಡಿವೆ.ವಾದಿರಾಜರಿಂದ ಗುಂಡಕ್ರೀಯೆ,ಶ್ರೀಪಾದರಾಜರಿಂದ ದಂಡಕಗಳು (ಸರಳ ರಗಳೆಯ ರೂಪ) ರಚನೆಗೊಂಡಿವೆ.
ಉದ್ಗ್ರಾಹ,
ಮೇಲಾಪಕ,
ಧ್ರುವ,
ಅಂತರ ,
ಆಭೋಗ
ಎಂಬ ಐದು ಧಾತುಗಳಿಂದ 'ಉಗಾಭೊಗ' ರಚನೆಗೊಂಡಿತೆಂದು ಹೇಳುತ್ತಾರೆ. ಈ ಉಗಾಭೋಗಗಳು ಬಹು ಚಿಕ್ಕದಾದವು.
ಇಂಥ ಹಲವು ರೂಪಗಳಲ್ಲಿ "ತಾಳ ಪ್ರಧಾನವಾಗಿ ಸಪ್ತ ತಾಳಗಳಲ್ಲಿ 'ಜತೆ' ಎಂಬ 2 ಸಾಲಿನೊಂದಿಗೆ ಅಂಕಿತದೊಂದಿಗೆ ಕೊನೆಗೊಳ್ಳುವ ರಚನೆಯಾಗಿ 'ಸುಳಾದಿ' ದಾಸ ಸಾಹಿತ್ಯದಲ್ಲಿ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ".ಹರಿದಾಸರ ಪರಂಪರೆಯಲ್ಲಿ ಮೊದಲಿಗೆ ಆದ್ಯರು ೬೦ ಜನರು ನಂತರ ಶ್ರೀಪಾದರಾಜರು,ಶ್ರೀವ್ಯಾಸರಾಯರು,ಶ್ರೀಹಯವದನರು ,ಶ್ರೀ ಪುರಂದರ ದಾಸರು ,ಶ್ರೀವಿಜಯದಾಸರು.... ರಚಿಸಿಕೊಂಡು ಬಂದಿದ್ದಾರೆ.ಕೀರ್ತನೆಯು ಅನೇಕರಾಗ ಮಾಲಿಕೆಗಳಲ್ಲಿದ್ದು ಒಂದೇ ತಾಳದಲ್ಲಿದ್ದಂತೆ;ಒಂದೆ ರಾಗ ಅನೇಕ ತಾಳದಲ್ಲಿರುವುದು ಸುಳಾದಿ.
ಎಳು ಭಿನ್ನ ತಾಳಗಳ ನುಡಿಗಳನ್ನು ಏಕತ್ವಗೊಳಿಸಿ 'ಸುಳಾದಿ' ರಚನೆಗೊಳ್ಳುತ್ತದೆ.ಅವೇ
ಧ್ರುವ , ಮಟ್ಟ ,ರೂಪಕ,ಝಂಪ ,ತ್ರಿಪುಟ,ಅಟ್ಟ ಮತ್ತು ಆದಿ ತಾಳಗಳು. ಕನಿಷ್ಟ 5, ಗರಿಷ್ಟ 10 ನುಡಿಗಳು ಸುಳಾದಿಗಳಲ್ಲಿ ಇವೆ. 5 ನುಡಿಗಳಲ್ಲಿ (ರೂಪಕ,ಝುಂಪ) ಇವೆರಡಿಲ್ಲಾ ,10ರಲ್ಲಿ ಪುನರಾವರ್ತನೆಗೊಳ್ಳುತ್ತವೆ.ಮುಂದೆ 'ಜತೆ' ಯಲ್ಲಿ ಎಲ್ಲ ತಾಳಗಳಲ್ಲಿ ಹೇಳಿರುವುದು ಜತೆ(ಸರಿ)ಯಾಗಿ ಕೂಡಿಕೊಂಡು ಬರುವುದು.ಅಂದರೆ ಎರಡು ಸರಳ ರೇಖೆಗಳ ಹೇಗೆ ಜತೆಯಾಗಿರುವವೊ ಹಾಗೆಯೆ ಸಮನ್ವಯಿಸುವುದು. ಪದದ ಅರ್ಥ ಪಲ್ಲವಿಯಲ್ಲಿದ್ದಂತೆ, ಸುಳಾದಿಯ ಅರ್ಥ ಅಭಿಪ್ರಾಯ ಜತೆಯಲ್ಲಿರುವುದು.
ಸುಳಾದಿಗಳಲ್ಲಿ ಸಾಮನ್ಯ ವಿವರಣೆ
ಧ್ರುವತಾಳದಲ್ಲಿ : - ವಸ್ತು ನಿಶ್ಚಯ ವಿಷಯ
ಮಟ್ಟತಾಳದಲ್ಲಿ : - ವಸ್ತುವಿನ ಗುಣಧರ್ಮ ನಿರೂಪಣೆ.
ರೂಪದಲ್ಲಿ :- ವಸ್ತುವಿನ ಗುಣಧರ್ಮ ಕಾರಣ ವಿವೇಚನೆ
ಝಂಪಾದಲ್ಲಿ :- ವಸ್ತು ಗುಣಧರ್ಮ ಕಾರಣ ಕಾರ್ಯರೂಪದಿ,ಮನಸ್ಸಿನಲ್ಲಿ ಪರಿಣಮಿಸುವಿಕೆ.
ತ್ರಿಪುಟದಲ್ಲಿ :- ಗುಣಧರ್ಮ ಕಾರ್ಯ ಪ್ರಾಪ್ತಿ ವಿಷಯ ಪ್ರಾರ್ಥನೆ.
ಅಟ್ಟತಾಳದಲ್ಲಿ :- ಮನೋವೇಗ ಸ್ತೋತ್ರ ಸಂಗೀತ ತಾಳ ಕುಣಿತ
ಆದಿತಾಳದಲ್ಲಿ :-ಸ್ತೊತ್ರಾನಂದದಲ್ಲಿ ನಲಿದಾಡುವಿಕೆ ಮತ್ತು ಸ್ವಲ್ಪ ಹೆಚ್ಚಿನ ವೇಗ ಕುಣಿತ..
ಸುಳಾದಿಯ ಸ್ವರೂಪದ ಬಗ್ಗೆ
ಸುಳಾದಿಯ ಸ್ವರೂಪದ ಬಗ್ಗೆ ಬೆಳಕಿಗೆ ಬಂದಿರುವ ವಿಷಯಗಳು ಸ್ವಲ್ಪ ಪರಿಶೀಲಿಸಬಹುದು .
ಒಮ್ಮೆ ಹುಲುಜೂರು ಕೃಷ್ಣಾಚಾರ್ಯರು "ಕರ್ಣಾಟಕ ಸಂಗೀತವೂ ದಾಸಕೂಟವೂ " ಎಂಬ ತಮ್ಮ ಗ್ರಂಥದಲ್ಲಿ ಸುಳಾದಿಯ ಸ್ವರೂಪವನ್ನು ಸಾಕಷ್ಟು ಪರಿಚಯ ಮಾಡಿ ಕೊಟ್ಟಿದ್ದರೂ
ಇತ್ತೀಚಿಗೆ (೧೯೮೫) ಈ ಕ್ಷೇತ್ರದಲ್ಲಿ ವಿಶೇಷವಾಗಿ ಅಧ್ಯಯನ ನಡೆಸಿರುವ ಡಾ ।। ರಾ. ಸತ್ಯನಾರಾಯಣ ಅವರು ತಮ್ಮ ಲೇಖನವೊಂದರಲ್ಲಿ (Click here :Suladis and Ugabhogas of Karnataka Music )ಶ್ರೀ ಪುರಂದರ ದಾಸರ ಸಾಹಿತ್ಯ XI ೧೯೬೫ : ಕೃಷ್ಣ ಲೀಲಾ ,ಇಂಗ್ಲಿಷ್ ಲೇಖನ (ಪುಟ ೬೮-೭೮) ಸುಳಾದಿಯ ಹೆಸರಿನ ಉಲ್ಲೇಖವೇನೋ 'ಸೂಡಾದಿ' ಎಂಬುದಾಗಿ , ಅಗ್ಗಳ ( ಕ್ರಿ . ಶ ೧೧೮೯) ಮೊದಲ್ಗೊಂಡು ಗೋವಿಂದ ವೈದ್ಯನ ವರೆಗೆ ( ಕ್ರಿ . ಶ ೧೬೪೫) ಅನೇಕ ಕಾವ್ಯಗಳಲ್ಲಿ ಪ್ರಯೋಗ ವಾಗಿರುವದನ್ನು ಗಮನ್ನಕ್ಕೆ ತಂದಿರುವರು . ಇದ ಲಕ್ಷಣವನ್ನು ಪುಂಡಲಿಕ ವಿಠಲನು ( ಕ್ರಿ . ಶ ೧೫೧೯-೧೫೭೭) ಹೀಗೆ ಹೇಳಿರುವನು .
ಧ್ರುವಕೊ ಮಂಠ ಕಶ್ಚೈ ವ ರೂಪಕೋ ಝುಂಪ ಕಸ್ತಥಾ ।
ತ್ರಿಪುಟಶ್ಚಾಡ್ಜ ತಾಲಾಖ್ಯ ಶ್ವೇಕ ತಾಲ ಇತಿಕ್ರಮಾತ್ ।
ಸಪ್ತ ಸೂಡಾದಿರಿತ್ಯಾಕ್ತೋ ಲಕ್ಷ ಲಕ್ಷಣ ಕೋವಿದೈ : ।। (ನರ್ತನ ನಿರ್ಣಯ )
ಈ ಸೂತ್ರವನ್ನು ಸ್ಥೂಲವಾಗಿ ಸಮೀಕ್ಷಿಸಿದರೆ "ಸುಳಾದಿ " ಎಂಬ ಪ್ರಕಾರವು ಸಪ್ತ ಸುಡಾದಿಗಳ ಆಧರಾದ ಮೇಲೆ ರಚಿತವಾದುದೆಂದು ಸ್ಪಷ್ಟ ವಾಗುತ್ತದೆ . ಈ ತಾಳಗಳು ಯಾವುದೆಂದರೆ ಧ್ರು ವ ,ಮಂಠ ,ರೂಪಕ ,ಝುಂಪ ,ತ್ರಿಪುಟ ,ಅಡ್ದತಾಲ ಮತ್ತು ಏಕತಾಲಗಳು . ಇವು ಕ್ರಮವಾಗಿ ಬರಬೇಕೆಂಬ ನಿರ್ಬಂಧವೂ ಉಂಟು . ಕಟ್ಟಕಡೆಯ 'ಜತೆ ' ಯ ಹೆಸರನ್ನು ಹೇಳವದಿದ್ದರೂ ,ಪ್ರಯೋಗದಲ್ಲಿರುವದನ್ನು ಕಾಣಬಹುದು . ಒಮ್ಮೊಮ್ಮೆ ಕೆಲವು ಸುಳಾದಿಗಳಲ್ಲಿ "ಜತೆ" ಇಲ್ಲದಿರುವದನ್ನು ಕಂಡರೆ ಇದು ಐಚ್ಚಿಕ ವಿರಬಹುದೇ ಎಂಬ ಸಂಶಯ ಉದ್ಭವ ವಾಗುತ್ತದೆ .
ಹರಿದಾಸರಲ್ಲಿ ಶ್ರೀ ಪಾದರಾಜರು ಮೊದಲ್ಗೊಂಡು ಅನೇಕರು ಸುಲಾದಿಗಲನ್ನು ಬರೆದಿದ್ದರೂ ಸಂಗೀತ ಶಾಸ್ತ್ರಗ್ರಂಥ ಗಳಲ್ಲಿ ಈ ವರೆಗೆ ಪುರಂದರದಾಸರ ಹೆಸರು ಹಾಗು ಅವರ ಸುಳಾದಿಗಳು ಉದಾಹರಣೆಗಳು ಕಂಡು ಬರುತ್ತವೆ . "ಸಂಗೀತ ಸಾರಾಮೃತ "ದ ಕರ್ತೃವಾದ ತುಲ್ಜಾಜಿ ಮಹಾರಾಜನು ಸುಳಾದಿಯ ಲಕ್ಷಣವನ್ನು ನಿರ್ದೇಶಿಸುವಲ್ಲಿ ಪುರಂದರ ದಾಸರ ಹೆಸರನ್ನು ಹೇಳಿರುತ್ತಾನೆ .
ಇತಿ ಸಾಲಿಗ ಸೂಡಸ್ಥ ಗೀತಾನಾಂ ಲಕ್ಷ ಕೀರ್ತನಂ ।
ಶ್ರೀ ಪುರಂದರ ದಾಸಾದೈರಭಿಯುಕ್ತೈ : ಪುರಾತನೈ :
ಪ್ರಯುಕ್ತೆಷು ಪ್ರಸಿದ್ದೆಷು ಲಕ್ಸ್ಹೇ ಷು ವಿವಿಧೇ ಷ್ವ ಪಿ
ಧ್ರುವಾ ದಿ ಷುತ್ವದುಕ್ತಾನಿ ಲಕ್ಷಣಾನಿ ಮಹಾಮತೇ ।।
(ಅ XII,ಪು ೧೫೦)
"ಸಂಗೀತ ಸಂಪ್ರದಾಯ ಪ್ರದರ್ಶಿನಿ"ಯ ಕರ್ತೃವಾದ ಸುಬ್ಬುರಾಮ ದೀಕ್ಷಿತರು (ಕ್ರಿ ಶ ೧೮೨೯ - ೧೯೧೬) ತಮ್ಮ ಗ್ರಂಥದಲ್ಲಿ ಪುರಂದರ ದಾಸರ ಎರಡು ಲಕ್ಷವಾಗಿ ಉದಾಹರಿಸಿರುವರು . ಇವುಗಳನ್ನೆಲ್ಲ ಗಮನಿಸಿದರೆ ಸುಳಾದಿಯ ಪ್ರಾಚೀನತೆ ಆದರ ತಾಳಮಾಲಿಕೆಯ ನಿಯತತೆ ಮತ್ತು ಪುರಂದರದಾಸರ ಪ್ರಾಶಸ್ತ್ಯಗಳನೆಲ್ಲ ಪ್ರಕಟವಾಗುತ್ತದೆ.
(ಆಧಾರ:
1.ಪ್ರಾರ್ಥನಾ ಸುಳಾದಿಗಳು (೧೯೮೬ ಪ್ರಕಟಿತ) .ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲ.ಲಿಂಗಸೂಗುರು.
2.ವಿಜಯದಾಸರು, ಶ್ರೀವರದೇಂದ್ರ ಹರಿದಾಸ ಸಾಹಿತ್ಯ ಮಂಡಲ.ಲಿಂಗಸೂಗುರು.
3.ದಾಸ ಸಾಹಿತ್ಯ ಸೌರಭ : ಡಾ|| ಮಧುಸೂಧನಾಚಾರ್ಯ ಜೋಷಿ
)